ಹಿಮಾಲಯ ಸುತ್ತಣ ಅನನ್ಯ ಪ್ರವಾಸ ಕಥನ
ಮೈಖೆಲ್ ಪಾಲಿನ್  ಪ್ರಸ್ತುತ ಸಂದರ್ಭದ ಪ್ರಮುಖ ಪ್ರವಾಸಿ ಕಥನಗಾರ. ಇವರ ಕೃತಿಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇದೆ. ತಾನು ಸಂದರ್ಶಿಸುವ ಸ್ಥಳಗಳ ಬಗ್ಗೆ ವಿಭಿನ್ನ ನೋಟವನ್ನು ಓದುಗರಿಗೆ ಕಟ್ಟಿಕೊಡುವುದು ಪಾಲಿನ್  ವಿಶಿಷ್ಟತೆ. ಪಾಲಿನ್ ಒಟ್ಟು ಏಳು ಪ್ರವಾಸ ಕಥನಗಳನ್ನು ಬರೆದಿದ್ದಾರೆ. ಇದರಲ್ಲಿ ಹಿಮಾಲಯದ  ಪ್ರವಾಸ ರೋಚಕವಾಗಿದೆ. ಈ ಕೃತಿಯ ಓದುವಿಕೆಯೇ ಒಂದು ಅದ್ಭುತ ಅನುಭವ.

ನೋಡಿದ ಸ್ಥಳಗಳ ಚರಿತ್ರೆಯನ್ನ ಕರಾರುವಾಕ್ಕಾಗಿ ಕಟ್ಟಿಕೊಡುವ ಪಾಲಿನ್ ಕೇವಲ ಅಂಕಿಅಂಶಗಳಿಗೆ ಕಟ್ಟು ಬೀಳುವುದಿಲ್ಲ. ಸ್ವಾರಸ್ಯಕರ ವಿಷಯಗಳ ಹೆಕ್ಕಿ ನಮ್ಮ ಮುಂದಿಡುತ್ತಾರೆ. ಈ ಕಾರಣದಿಂದಲೂ ಅವರ ಬರಹ ಓದುತ್ತಿದ್ದರೆ, ವಿವರಣೆ ಸಿನಿಮಾ ರೀತಿ ಸುರುಳಿ ಬಿಚ್ಚಿಕೊಳ್ಳುತ್ತದೆ.

ಸ್ವತಃ ಪಾಲಿನ್ ಹೇಳುವಂತೆ ಈ ಕಥನ ಹಿಮಾಲಯದ ಬಗ್ಗೆ, ಅದರ ಸುತ್ತಲಿನ ಇದುವರೆಗಿನ ಘಟನಾವಳಿಗಳ ಬಗ್ಗೆ ಅಪಾರ ಆಸಕ್ತಿ ಉಳ್ಳ ಓರ್ವ ಪ್ರವಾಸಿಯಾಗಿ ಬರೆದಿದ್ದೇ ಹೊರತು, ಶಿಖರ ಏರುವ ಗುರಿ ಮುಂದಿಟ್ಟುಕೊಂಡು ಶಿಖರದ ಸೌಂದರ್ಯದ ನೋಡುವಿಕೆಯತ್ತ ಗಮನ ನೀಡದ ಮನಸ್ಥಿತಿ ಇರುವ ಪರ್ವತಾರೋಹಿಯಾಗಿ ಅಲ್ಲ.

ಆದ್ದರಿಂದಲೇ ಕೃತಿಯ ಕಥನ , ಖೈಬರ್ ಪಾಸ್ ,  ಕಾರಕೊರಂ, ಹಿಂದುಖುಷ್ ಪರ್ವತ ಶ್ರೇಣಿಗಳ ಮಧ್ಯದಲ್ಲಿ ಹರಡಿಕೊಳ್ಳುತ್ತದೆ.   ಹಿಮಾಲಯದ ಉಗಮದಿಂದ  ಆರಂಭವಾಗಿ ಬಾಂಗ್ಲಾದೇಶದಲ್ಲಿ ಮಣ್ಣಾಗಿ ಬಂಗಾಳಕೊಲ್ಲಿ ಮುಟ್ಟುವ ತನಕ ಸುಮಾರು ೧೮೦೦ ಕೀ. ಮೀ. ಗಳಷ್ಟು ದೂರ ಹಬ್ಬಿದೆ.

ನಿರೀಕ್ಷೆಗಳೊಂದಿಗೆ ಖೈಬರ್  ತಲುಪುವ ಪಾಲಿನ್  ಮುಂದೆ  ಪೇಶಾವರ್ ಮುಖಾಂತರ ಕಲಾಶ್ ಪರ್ವತ ಕಣಿವೆಗಳನ್ನು ತಲುಪಿ ಮುಂದೆ ಶಂಡೋರ್ ಪಾಸ್ ನಲ್ಲಿ ವಿಶ್ವವಿಖ್ಯಾತ ಪೋಲೋ ಆಟ ವೀಕ್ಷಿಸುತ್ತಾರೆ. ಇದರ ವಿವರಣೆಯನ್ನು ಅವರು ಓದುಗರಿಗೆ ದಾಟಿಸುವ ಪರಿ ಅಚ್ಚರಿ ಮೂಡಿಸುತ್ತದೆ.

ವಿಶ್ವದ ಅತಿ ಎತ್ತರದ ೩೦ ಪರ್ವತ ಶಿಖರಗಳಾದ ಸ್ಕರ್ದು ಮತ್ತು ಕೊಂಕಾರ್ಡಿಗಳಿಗೆ  ವಿಮಾನದಲ್ಲಿ ತೆರಳುತ್ತಾರೆ. ಅಲ್ಲಿ ಈ ಶಿಖರ ಸ್ಥಳಗಳನ್ನು ಪಾಲಿನ್  ಜೀಪಿನಲ್ಲಿ ಕ್ರಮಿಸುವ ಪರಿಯೇ  ಸಾಹಸಮಯ ಎನಿಸುತ್ತದೆ.

 ಭಾರತದ ಬಗ್ಗೆ ಪಾಲಿನ್ ಗೆ ತಣಿಯದ ಕುತೂಹಲದ ಜೊತಗೆ ಅಪಾರ ಗೌರವ.  ವಾಘಾ ಗಡಿ ಮುಖಾಂತರ ಭಾರತ ಪ್ರವೇಶಿಸುತ್ತಾರೆ. ನಂತರ ಧರ್ಮಶಾಲಕ್ಕೆ ತೆರಳಿ ಟಿಬೇಟಿಯನ್ ಧರ್ಮಗುರು ದಲೈಲಾಮಾ ಅವರನ್ನು ಸಂದರ್ಶಿಸುತ್ತಾರೆ. ಕಣಿವೆಗಳ ನಾಡು ಕಾಶ್ಮೀರ ಮತ್ತು ಲಡಾಖ್  ಪ್ರವಾಸದಲ್ಲಿ ಯಾಕ್ ಮೃಗದಿಂದ ಅಲ್ಲಿನ ನಿವಾಸಿಗಳು ಹಾಲು ಕರೆಯುವುದನ್ನು ವೀಕ್ಷಿಸುವ ಪಾಲಿನ್ ತಾನು ಕೂಡ ಹಾಗೆ ಮಾಡಲು ಮುಂದಾಗುತ್ತಾರೆ. ಈ ಪ್ರಯತ್ನದಲ್ಲಿ ಮೊದಮೊದಲಿಗೆ ವಿಫಲರಾಗುವ ಅವರು ನಂತರ ಸಫಲರು ಆಗುತ್ತಾರೆ. ಇದನ್ನು ಹಾಸ್ಯಮಯವಾಗಿ ಚಿತ್ರಿಸಿದ್ದಾರೆ.

ದೆಹಲಿ ಸೇರುವ ಅವರು ಅಲ್ಲಿಂದ ನೇಪಾಳದ ರಾಧಾನಿ ಠ್ಮಂಡು ತಲುಪುತ್ತಾರೆ. ನೇಪಾಳಿಗರ  ದಸ್ಯೇನ್ (ದಸರಾ) ಉತ್ಸವದಲ್ಲಿ ಬಹು ಉತ್ಸಾಹದಿಂದ ಭಾಗವಹಿಸುತ್ತಾರೆ. ಪಾಲಿನ್ ಹೆಚ್ಚುಗಾರಿಕೆ ಏನೆಂದರೆ ಅಲ್ಲಿನ ದೊರೆಯನ್ನು ಸಂದರ್ಶಿಸಿದ ವಿವರಗಳನ್ನಷ್ಟೆ ನೀಡದೆ ನೇಪಾಳಿಗರ ಗ್ರಾಮೀಣ ಬದುಕಿನ ಚಿತ್ರಣವನ್ನು ಮುತುವರ್ಜಿಯಿಂದ ಮುಂದಿಡುತ್ತಾರೆ.

ಕಠ್ಮಂಡುವಿನಿಂದ ಅನ್ನಪೂರ್ಣ ಶಿಖರ ಶ್ರೇಣಿ ಆರಂಭಿಕ ಶಿಬಿರ ತಲುಪುವ ಅವರು  ೧೩,೪೦೦ ಅಡಿ ಎತ್ತರದಲ್ಲಿ ಶಿಖರ ಅಸ್ವಸ್ಥತೆಗೆ ಒಳಗಾಗುತ್ತಾರೆ. ಇದರಿಂದ ಸಾವಿನ ದವಡೆಗೆ ಹೋಗಿಬಂದ ಕಹಿ ಅನುಭವಿಸಿ, ಚೇತರಿಸಿಕೊಳ್ಳುತ್ತಾರೆ.

ಜಗತ್ತಿನ ಚಾವಣಿ ಎನಿಸಿದ ಟಿಬೆಟ್ ಅನ್ನು ಕಾಲ್ನಡಿಗೆಯಲ್ಲಿ ತಿರುಗಾಡುತ್ತಾರೆ. ಇದಂತೂ ಅನನ್ಯ ವಿವರಣೆಯೇ ಸರಿ. ಈ ವಿವರಣೆ ಓದುತ್ತಿದ್ದರೆ ನಾವು ಅಲ್ಲಿ ಅಡ್ಡಾಡುತ್ತಿದ್ದೇವೆ ಎಂಬ ಅನುಭೂತಿ ಉಂಟಾಗುತ್ತದೆ.

ಟಿಬೆಟ್ ನಂತರ ನಾಗಾಲ್ಯಾಂಡ್ ,  ಅಸ್ಸಾಂ ರಾಜ್ಯಗಳ ಮಾರ್ಗವಾಗಿ ಭೂತಾನ್ ಪ್ರವೇಶಿಸುತ್ತಾರೆ. ಭೂತಾನ್  ಗ್ರಾಮೀಣ ಜನಜೀವನದ ಚಿತ್ರಣವನ್ನು ವಿವರವಾಗಿ ತಿಳಿಸುತ್ತಾರೆ.ಅಲ್ಲಿಂದ ಮುಂದೆ ಢಾಕಾ ತಲುಪಿ, ಹಿಮಾಲಯ ಮಣ್ಣಾಗಿ ಸಮುದ್ರ ಸೇರ್ಪಡೆ ಆಗುವುದನ್ನು ನೋಡುತ್ತಾರೆ.
ಇಷ್ಟೆಲ್ಲ ಸ್ಥಳಗಳನ್ನು ಅವರು ಒಂದೇ ಹಂತದಲ್ಲಿ ಸಂದರ್ಶಿಸುವುದಿಲ್ಲ. ಯೋಜನಾಬದ್ಧವಾಗಿ ಕೆಲವು ಹಂತಗಳಲ್ಲಿ ಭೇಟಿ ನೀಡುತ್ತಾರೆ.
   
ಮೇ 12,  2003 ರಲ್ಲಿ ಪ್ರವಾಸ ಆರಂಭಿಸುವ ಪಾಲಿನ್ ಏಪ್ರಿಲ್  7, 2004ರಲ್ಲಿ ತಮ್ಮ ಗುರಿ ಪೂರೈಸುತ್ತಾರೆ. ತಮಗೆ ತುಂಬ ಇಷ್ಟವಾದ ಸ್ಥಳಗಳನ್ನು, ಉತ್ಸವಗಳನ್ನು, ಪೋಲೋ ಕ್ರೀಡೆಯನ್ನು ಮತ್ತೆಮತ್ತೆ ನೋಡುತ್ತಾರೆ.
ಹಿಮಾಲಯ ಪ್ರವಾಸ ಕೈಗೆತ್ತಿಕೊಂಡಾಗ ಪಾಲಿನ್ ವಯಸ್ಸು ೬೦ ವರ್ಷ. .ಅನ್ವೇಷಣೆಯ ಪ್ರವ್ರತ್ತಿ ಇರುವ ಮನಸಿಗೆ ವಯಸ್ಸಿನ ನಿರ್ಬಂಧ ಇರುವುದಿಲ್ಲ ಎಂಬುದನ್ನು ಈ ಕೃತಿ ತಿಳಿಸಿಕೊಡುತ್ತದೆ.

ಕೃತಿಯ ಸೊಬಗು, ತೂಕ ಹೆಚ್ಚಿಸುವುದರಲ್ಲಿ ಛಾಯಾಚಿತ್ರಗಳ ಕೊಡುಗೆಯೂ ಅಪಾರ. ಚಿತ್ರಗಳಿಲ್ಲದಿದ್ದರೆ ಪ್ರವಾಸ ಕಥನ ನಿಸ್ಸಾರ ಎನಿಸುತ್ತದೆ. ಒಳನೋಟಗಳಿರುವ ಛಾಯಾಚಿತ್ರಕಾರ ಬೆಸಿಲ್ ಪೊ ಅವರು ಕ್ಲಿಕ್ಕಿಸಿದ ಚಿತ್ರಗಳು ಕೃತಿಯ ಅಂದ ಹೆಚ್ಚಿಸಿವೆ. ಕೃತಿಯನ್ನು ಓದಿದಾಗ ಮಧ್ಯೆ ಮಧ್ಯೆ ವಿರಾಮ ನೀಡಿ ಮುಂದುವರಿಸಿದ ಪ್ರವಾಸದಂತೆ ಕಾಣದೆ ನಿರಂತರವಾಗಿ ಸುತ್ತಾಡಿದ ಪ್ರವಾಸಿಗನ ಕಥನ ಎನಿಸುತ್ತದೆ. ಇದು ಕೂಡ ‘ಹಿಮಾಲಯ ಪ್ರವಾಸ’ ಕೃತಿ ವೈಶಿಷ್ಟತೆ.

ಹಿಮಾಲಯ ದರ್ಶನ, ಅದರ ಉದ್ದಗಲಕ್ಕೂ ಚಾಚಿಕೊಂಡಿರುವ ವಿಶಿಷ್ಟ ಸಂಸ್ಕೃತಿಗಳ ಅರಿಯುವಿಕೆ, ಸಾಧ್ಯವಾದರೆ ಈ ಸ್ಥಳಗಳನ್ನು ನೋಡಬೇಕು ಎಂಬ ಆಸಕ್ತಿ ಇರುವ ಎಲ್ಲರೂ ಓದಬೇಕಾದ ಕೃತಿಯಿದು.
ಲೇಖಕಿ: ಡಾ. ಪಿ.ವಿ. ಅನುಸೂಯ

Comments