ಹೆಣ್ಣೆ, ನಿನ್ನ ಮತ್ತೊಂದು ಹೆಸರು ಚಂಚಲತೆಯೆ............?

'ಸನ್ ಮ್ಯೂಸಿಕ್' ವಾಹಿನಿಯಲ್ಲಿ 'ವಿನ್ನೈತಾಂಡಿ ವರುವಯ' ಚಿತ್ರದ ಹಾಡುಗಳು ಜನಪ್ರಿಯ. ಇವುಗಳನ್ನು ಆಗಾಗ ನೋಡುತ್ತಿದ್ದೆನಾದರೂ ಚಿತ್ರ ವೀಕ್ಷಿಸಿರಲಿಲ್ಲ.  ಮೊನ್ನೆ  ಈ ಚಿತ್ರದ ಡಿವಿಡಿ  ತಂದು ನೋಡಿದೆ. ಮೊದಲಿಗೆ ಇಡೀ ಚಿತ್ರದ ವ್ಯಾಕರಣ ಹೊಸತನವಿದೆ ಎನಿಸಿತು. ಇಡೀ ಚಿತ್ರವನ್ನು ಪ್ರೆಸೆಂಟ್ ಮಾಡಿರುವ ರೀತಿ ಬಗ್ಗೆ ಮೆಚ್ಚುಗೆ ಮೂಡಿತು. ಇವೆಲ್ಲದರ ಜೊತೆಗೆ ಕಥೆಯ ಹೂರಣ ಕೂಡ ವಿಭಿನ್ನವಾಗಿದೆ. ಫ್ಲಾಷ್ ಬ್ಯಾಕಿನ ಮೂಲಕ ಇಡೀ ಸ್ಟೋರಿಯನ್ನು ಕಥಾ ನಾಯಕ ನಿರೂಪಿಸುತ್ತಾ ಹೋಗುತ್ತಾನೆ.

ಕಥಾ ನಾಯಕ ಕಾರ್ತಿಕ್ (ಸಿಂಬರಸನ್) ಇಂಜಿನಿಯರ್. ಆದರೀತನಿಗೆ ಸಿನೆಮಾ ಬಗ್ಗೆ ತೀವ್ರ ಆಸಕ್ತಿ. ಸ್ನೇಹಿತರ ಮೂಲಕ ಪರಿಚಯವಾದ  ಸಿನಿಮಾ ಕ್ಯಾಮರಾಮನ್ ಗಣೇಶ್(ಗಣೇಶ್) ತಮ್ಮ ಪ್ರಭಾವ ಬಳಸಿ ಖ್ಯಾತ ನಿರ್ದೇಶಕರ ಬಳಿ ಸಹಾಯಕ ನಿರ್ದೇಶಕರಾಗಿ ಸೇರಿಸುತ್ತಾರೆ. ಒಮ್ಮೆ ತಾವಿರುವ ಬಾಡಿಗೆ ಮನೆ ಗೇಟಿನ ಬಳಿ ಕಾರ್ತೀಕ್ ನಿಂತಿದ್ದಾಗ ಸೀರೆಯುಟ್ಟ ಯುವತಿಯೋರ್ವಳು ತೀರಾ ಬೇಗವೂ ಅಲ್ಲದ ನಿಧಾನವೂ ಅಲ್ಲದ ರೀತಿ ನಡೆದು ಬರುತ್ತಿರುವುದನ್ನು ನೋಡುತ್ತಾನೆ. ನೋಡುತ್ತಾ ನೋಡುತ್ತಾ ಈತನ ಕಣ್ಣುಗಳಲ್ಲಿ ಮಿಂಚು. 'love at first sight' ಭಾವನೆ. ಆಕೆ ಗೇಟ್ ತೆರೆದು ಈತನಿರುವ ಮನೆಯ ಮೊದಲ ಮಹಡಿಗೆ ತೆರಳುತ್ತಾನೆ. ಬಳಿಕ ಈತನ ಸಹೋದರಿ ಮೂಲಕ ಆಕೆ, ಮಲೆಯಾಳಿ ಮನೆ ಮಾಲೀಕರ ಮಗಳು ಜೆಸ್ಸಿ (ತ್ರಿಷಾ) ಎನ್ನುವುದು ತಿಳಿದು ಬರುತ್ತದೆ. ಪರಸ್ಪರ ಪರಿಚಯ ಆಗುತ್ತದೆ.
ಕಾರ್ತೀಕ್ ಎಲ್ಲಿ ಕುಳಿತರೂ ನಿಂತರೂ ಜೆಸ್ಸಿಯದೇ ಧ್ಯಾನ. ಸಾಫ್ಟ್ ವೇರ್ ಇಂಜಿನಿಯರ್ ಆದ ಈಕೆ ಎಲ್ಲಿ ಹೋದರಲ್ಲಿ ಹಿಂಬಾಲಿಸತೊಡಗುತ್ತಾನೆ. ಇದು ಆಕೆಗೆ ತಿಳಿಯುತ್ತದೆ. ಆದರೆ ಒರಟಾಗಿ ರಿಯಾಕ್ಟ್ ಮಾಡುವುದಿಲ್ಲ. ನೀನು ಹಿಂಬಾಲಿಸುವುದು ನನಗೆ ತಿಳಿದಿದೆ ಎನ್ನುವುದನ್ನು ನಯವಾಗಿಯೇ ತಿಳಿಸುತ್ತಾಳೆ. ಜೆಸ್ಸಿಯನ್ನೇ ಧ್ಯಾನಿಸುತ್ತಾ ಇರುವ ಕಾರ್ತೀಕ್ ಒಮ್ಮೆ ಮನೆ ಸನಿಹದಲ್ಲಿಯೇ ತನ್ನ ಮನದಿಂಗಿತನ್ನು ತಿಳಿಸುತ್ತಾನೆ. ಆಗ ಆಕೆ 'ನನಗೆ ನೀನು ಇಷ್ಟವಿಲ್ಲ' ಎಂದು ಹೇಳುವುದಿಲ್ಲ. ಬದಲಾಗಿ ತನ್ನ ತಂದೆಗೆ ಸಿನಿಮಾ ಕಂಡರೆ ಆಗುವುದಿಲ್ಲ. ಇದಲ್ಲದೇ ಆತ ಕಟ್ಟಾ ಕ್ರಿಶ್ಚಿಯನ್. ಬೇರೆ ಧರ್ಮಕ್ಕೆ ಸೇರಿದ ಯುವಕನ್ನು ಮದುವೆಯಾಗಲು ಇಷ್ಟಪಡುವುದಿಲ್ಲ. ಅಲ್ಲದೇ ನಿನಗಿಂತ ನಾನು ಒಂದು ವರ್ಷ ಹಿರಿಯಳು(ವಯಸ್ಸು ಕೇಳಿದ ನಂತರ) ಎನ್ನುತ್ತಾಳೆ. ಆದರೆ ಎಲ್ಲಿಯೂ ನೀನು ನನಗೆ ಇಷ್ಟವಾಗಲಿಲ್ಲ ಎನ್ನುವುದಿಲ್ಲ. ಇದು ಕಾರ್ತಿಕ್ ಮನಸಿಗೆ ತಾಗುತ್ತದೆ. ಚೆನ್ನೈಯಿಂದ ಕೇರಳದ ತನ್ನ ತಂದೆಯ ಊರು ಅಲ್ಲೆಪ್ಪಿಗೆ ಸ್ವಲ್ಪ ದಿನ ಹೋಗಿ ಬರುವುದಾಗಿ ತಿಳಿಸಿ ತೆರಳುತ್ತಾಳೆ. ಬಳಿಕ ಕಾರ್ತಿಕ್ ಕೂಡ ಹಿರಿಯ ಗೆಳೆಯ ಗಣೇಶ್ ಜೊತೆ ಅಲ್ಲೆಪ್ಪಿಗೆ ತೆರಳುತ್ತಾನೆ. ಆದರೆ ನಿಖರ ವಿಳಾಸ ಗೊತ್ತಿಲ್ಲ. ಪ್ರಯಾಸದಿಂದ ಹುಡುಕುತ್ತಾರೆ. ಒಂದು ಭಾನುವಾರ ಚರ್ಚಿಗೆ ಪ್ರಾರ್ಥನೆ ಸಲ್ಲಿಸಲು ಬಂದ ಜೆಸ್ಸಿ ಭೇಟಿಯಾಗುತ್ತಾಳೆ. ಕಾರ್ತಿಕ್ ನನ್ನು ನೋಡುತ್ತಿದಂತೆ ಆಕೆಯ ಕಂಗಳಲ್ಲಿಯೂ ಮಿಂಚು. ತನ್ನ ಸಂಬಂಧಿಕರಿಗೆಲ್ಲ ಕಾರ್ತಿಕ್ ನನ್ನು ಕ್ಲಾಸ್ ಮೇಟ್ ಎಂದು ಪರಿಚಯಿಸುತ್ತಾಳೆ. ಮನೆಗೆ ಊಟಕ್ಕೆ ಬರುವಂತೆಯೂ ಆಮಂತ್ರಿಸುತ್ತಾಳೆ. ನಂತರದ ಮಾತುಕಥೆಯಲ್ಲಿ ನಾವಿಬ್ಬರೂ ಕೇವಲ ಫ್ರೆಂಡ್ಸ್ ಆಗಿರೋಣ ಎಂಬ ನಿರ್ಣಯಕ್ಕೆ ಬರುತ್ತಾರೆ. ನಂತರ ಚೆನ್ನೈಗೆ ತೆರಳುವ ಟ್ರೈನಿನಲ್ಲಿ ಇವರಿಬ್ಬರ ಸಂಬಂಧದ ಕಥೆ ಗಾಢವಾಗುತ್ತದೆ.
ಜೆಸ್ಸಿ ಇರುವ ಕಂಪಾರ್ಟ್ಮೆಂಟಿಗೆ ಬರುವ ಕಾರ್ತಿಕ್  ವಿಂಡೋ ಕಾರ್ನರಿನಲ್ಲಿ ಫ್ರೆಂಡ್ಸ್ ಎಂದು ಬರೆದು ಅದರ ಮುಂದೆ ಪ್ರಶ್ನಾರ್ಥಕ ಚಿಹ್ನೆ ಹಾಕುತ್ತಾನೆ. ನಂತರ ಇದನ್ನು ನೋಡುವ ಜೆಸ್ಸಿ ನೀನು ಟ್ರೈನಿನಲ್ಲಿಯೇ ಇದ್ದೀಯಾ ಎಂದು ಮೆಸೇಜ್ ಮಾಡುತ್ತಾಳೆ. ಕಂಪಾರ್ಟ್ಮೆಂಟಿಗೆ ಕಾರ್ತಿಕ್ ಬಂದ ನಂತರ ಆತ್ಮೀಯವಾಗಿ ಮಾತನಾಡತೊಗುತ್ತಾರೆ. ಈ ಹಂತದಲ್ಲಿ ಕಾರ್ತಿಕ್ ಆಕೆಯನ್ನು ಮತ್ತೆ ಮತ್ತೆ ಚುಂಬಿಸುತ್ತಾನೆ. ಆದರೆ ಈಕೆ ಪ್ರತಿರೋಧ ಒಡ್ಡುವುದಿಲ್ಲ...!

ತನ್ನ ತಂಗಿ ಹಿಂದೆ ಕಾರ್ತಿಕ್ ಸುತ್ತುತ್ತಿರುವುದನ್ನು ಗಮನಿಸಿದ ಆಕೆ ಅಣ್ಣ ಇದನ್ನು ಆಕ್ಷೇಪಿಸುತ್ತಾನೆ. ಗೆಳೆಯರ ಗುಂಪಿನೊಂದಿಗೆ ಹಲ್ಲೆ ಮಾಡಲು ಯತ್ನಿಸುತ್ತಾನೆ. ತೀವ್ರ ಹೊಡೆದಾಟವೂ ಆಗುತ್ತದೆ. ಇದು ಎರಡೂ ಮನೆಯವರ ವಿರಸಕ್ಕೂ ಕಾರಣವಾಗುತ್ತದೆ. ಈ ಹಂತದಲ್ಲಿಯೂ ಆಕೆ ತಾನು ಆತನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳುವುದಿಲ್ಲ. ಕಾರ್ತಿಕ್ ನ ನಿಜ ಪ್ರೇಮಕ್ಕೆ ಮನಸೋಲುವ ಜೆಸ್ಸಿ ತನ್ನ ಸಮ್ಮತಿಯನ್ನೂ ಸೂಚಿಸುತ್ತಾಳೆ. ಇಬ್ಬರೂ ಹಕ್ಕಿಗಳಂತೆ ಹಾರಾಡತೊಗುತ್ತಾರೆ. ಮನೆಯಲ್ಲಿ ಇದು ತಿಳಿದು ಮದುವೆ ನಿಶ್ಚಯವನ್ನೂ ಮಾಡುತ್ತಾರೆ. ನೋಡಲು ಬಂದ ಯುವಕನೊಂದಿಗೂ ಈಕೆ ಪ್ರಬುದ್ಧವಾಗಿ ವರ್ತಿಸುತ್ತಾಳೆ. ಆದರೆ ಮದುವೆಯನ್ನು ತೀವ್ರವಾಗಿ ಪ್ರತಿರೋಧಿಸುವುದಿಲ್ಲ. ಅಲ್ಲೆಪ್ಪಿಯ ಚರ್ಚಿನಲ್ಲಿ ಮದುವೆ ನಿಶ್ಚಯವಾಗುತ್ತದೆ. ಅದರ ದಿನಾಂಕ-ಸ್ಥಳ ಎಲ್ಲವನ್ನೂ ವಿವರವಾಗಿ ಹೇಳುವ ಈಕೆ, ಈತನ್ನನೇನೂ ನೇರವಾಗಿ ಆಮಂತ್ರಿಸುತ್ತಾಳೆ.
 ಕಾರ್ತೀಕ್ ಮತ್ತು ಗಣೇಶ್ ಇಬ್ಬರೂ ಅಲ್ಲೆಪ್ಪಿಗೆ ತೆರಳುತ್ತಾರೆ. ಮದುವೆ ದಿನ ಕಿಕ್ಕಿರಿದ ಚರ್ಚಿನ ಹಾಲಿನಲ್ಲಿ ಹಿಂದೆ ಕೂರುತ್ತಾರೆ. ಮದುಮಗ ನಂತರ ಮದುಮಗಳಿಬ್ಬರೂ ಫಾದರ್ ಬಳಿ ಬರುತ್ತಾರೆ. ಮದುವೆಗೆ ಪರಸ್ಪರ ಸಮ್ಮತವಿದೆಯೇ ಎಂದು ಕೇಳಿದಾಗ ಈಕೆ ತನಗಿಷ್ಟವಿಲ್ಲವೆಂದು ಹೊರ ದ್ವಾರದತ್ತ  ಧಾವಿಸಿ ಬರುವಾಗಷ್ಟೇ ಕಾರ್ತಿಕ್ ನನ್ನು ನೋಡುತ್ತಾಳೆ. ಆದರೆ ಮಾತನಾಡುವುದಿಲ್ಲ. ನಂತರ ಜೆಸ್ಸಿಯ ಅಣ್ಣ ಮತ್ತು ಸಂಬಂಧಿಕರು ಕಾರ್ತಿಕ್, ಗಣೇಶ್ ಜೊತೆ ಜಗಳವಾಡುತ್ತಾರೆ. ಇದು ಪೊಲೀಸ್ ಠಾಣೆ ಮೆಟ್ಟಿಲೇರುತ್ತದೆ. ಈ ಬಳಿಕವೂ ಮನೆಯಲ್ಲಿ ತನಗೆ ಕಾರ್ತೀಕ್ ಇಷ್ಟವೆಂದು ಜೆಸ್ಸಿ ಹೇಳುವುದಿಲ್ಲ. ಇದರಿಂದ ಜೆಸ್ಸಿ ಮನೆಯವರು ದೂರು ದಾಖಲಿಸದ ಕಾರಣ ಕಾರ್ತಿಕ್ ಮತ್ತು ಗಣೇಶ್ ಮನೆಯಿಂದ ಹೊರಬರುತ್ತಾರೆ. ಇಷ್ಟೆಲ್ಲ ಗಲಾಟೆಯಾದ ನಂತರವೂ ಕಾರ್ತಿಕ್ ರಾತ್ರಿಯ ವೇಳೆ ಜೆಸ್ಸಿಯನ್ನು ಆಕೆಯ ಮನೆಯಲ್ಲಿಯೇ ಸಂಧಿಸುತ್ತಾನೆ. ಹಿನ್ನೀರಿನ ಮಗ್ಗುಲಲ್ಲಿ ಇರುವ ಮನೆ ತೋಟದ ಬಳಿ ಇಬ್ಬರೂ ಮಾತನಾಡುತ್ತಾರೆ. ಆಗ ಜೆಸ್ಸಿ ತಾನಾಗಿ ಕಾರ್ತಿಕ್ ನನ್ನು ಗಾಢವಾಗಿ ಆಲಂಗಿಸಿ ಚುಂಬಿಸುತ್ತಾಳೆ.

ಚೆನ್ನೈಗೆ ಮರಳಿದ ನಂತರ ಇಬ್ಬರ ಸುತ್ತಾಟ ಮುಂದುವರಿಯುತ್ತದೆ. ಪ್ರೇಮವೂ ಗಾಢವಾಗುತ್ತಾ ಇಬ್ಬರೂ ಮಾನಸಿಕವಾಗಿ ಹತ್ತಿರವಾಗುತ್ತಾರೆ. ಈ ನಡುವೆ ಹಿಂದೆ ಆಗಿದ್ದ ಮನಸ್ತಾಪದ ಕಾರಣದಿಂದ ಕಾರ್ತಿಕ್ ತಂದೆ ಆ ಮನೆ ಖಾಲಿ ಮಾಡಿ ಬೇರೆಡೆಯ ಮತ್ತೊಂದು ಮನೆಗೆ ತೆರಳುತ್ತಾರೆ. ಇಬ್ಬರ ದೈನಂದಿನ ಭೇಟಿ ಮುಂದುವರೆಯುತ್ತದೆ. ಸಿನಿಮಾ ಚಿತ್ರೀಕರಣ ಚಟುವಟಿಕೆಗಳಲ್ಲಿ ಕಾರ್ತಿಕ್ ಕೂಡ ಬ್ಯುಸಿಯಾಗುತ್ತಾನೆ. 

ಕೆಲ ತಿಂಗಳ ಬಳಿಕ ಜೆಸ್ಸಿ ಜೊತೆ ಹಿಂದೆ ಮದುವೆ ನಿಶ್ಚಯವಾಗಿದ್ದ ವ್ಯಕ್ತಿಯೇ ಮತ್ತೆ ಬಂದು ವಿವಾಹದ ಪ್ರಸ್ತಾಪ ಮುಂದಿಡುತ್ತಾನೆ. ಕೊಂಚವೂ ಬೇಸರ ವ್ಯಕ್ತಪಡಿಸದೇ ಮತ್ತೆ ಬಂದ ಯುವಕನೊಡನೇ ಮದುವೆಯಾಗಲು ಮನೆಯ ಒತ್ತಡವೂ ಬರುತ್ತದೆ. ಈ ಘಳಿಗೆಯಲ್ಲಿ ಜೆಸ್ಸಿ ಮತ್ತೆ ಮತ್ತೆ ಕಾರ್ತಿಕ್ ಗೆ ಕಾಲ್ ಮಾಡುತ್ತಾಳೆ. ತನಗೆ ಮರಳಿ ಕರೆ ಮಾಡುವಂತೆ ಎಸ್.ಎಂ.ಎಸ್. ಮಾಡುತ್ತಾಳೆ. ಚಿತ್ರೀಕರಣದಲ್ಲಿ ತೀವ್ರ ಮಗ್ನವಾದ ಕಾರ್ತಿಕ್, ನಿರ್ದೇಶಕರ ಅಸಮಾಧಾನದ ಸೂಚನೆಯಿಂದ ಮೊಬೈಕ್ ಸ್ವಿಚ್ ಆಫ್ ಮಾಡಿರುತ್ತಾನೆ. ರಾತ್ರಿ ಮೊಬೈಲ್ ಆನ್ ಮಾಡಿದ ನಂತರ ಜೆಸ್ಸಿಯ ಮೆಸೇಜ್ ತಿಳಿಯುತ್ತದೆ. ಕರೆ ಮಾಡಿ ತಾನು ತುಂಬ ದೂರದ್ಲಲಿರುವುದಾಗಿಯೂ ಕೆಲವೇ ದಿನಗಳಲ್ಲಿ ಮರಳಿ ಬರುವುದಾಗಿ, ಅಲ್ಲಿಯ ತನಕ ಧೈರ್ಯಗೆಡದಂತಿರಲು ಸೂಚಿಸುತ್ತಾನೆ. ಆದರೆ ಮನಸು ತಡೆಯದೇ ಮರು ದಿನವೇ ಊರಿಗೆ ಮರಳಿ ಬರುತ್ತಾನೆ. ಜೆಸ್ಸಿ ಮನೆಗೆ ಬಂದು ಆಕೆಯನ್ನು ಹೊರ ಕರೆದು ಮಾತನಾಡಿದರೂ ಆಕೆಯದು ನಕಾರಾತ್ಮಕ ನಡವಳಿಕೆ. ಈತನನ್ನು ತಾನು ಪ್ರೀತಿಸಿಯೇ ಇಲ್ಲವೇನೂ ಎಂಬಂತೆ ನಡೆದುಕೊಳ್ಳುತ್ತಾಳೆ. ಬಳಿಕ ವಿವಾಹವಾಗಿ ಪತಿಯೊಡನೆ ವಿದೇಶಕ್ಕೆ ತೆರಳುತ್ತಾಳೆ. 
ಮಾನಸಿಕ ಆಘಾತದಿಂದ ಚೇತರಿಸಿಕೊಳ್ಳುವ ಕಾರ್ತಿಕ್ ತಮ್ಮಿಬ್ಬರ ಪ್ರೇಮದ ಕುರಿತು ಚಿತ್ರಕಥೆ ರಚಿಸುತ್ತಾನೆ. ಇದು ನಿರ್ಮಾಪಕರಿಗೂ ಇಷ್ಟವಾಗುತ್ತದೆ. ಇದಕ್ಕೆ ಗಣೇಶ್ ಛಾಯಾಗ್ರಹಕರಾಗುತ್ತಾರೆ. ವಿದೇಶದಲ್ಲಿ ಷೂಟಿಂಗ್ ಆಗುವಾಗ ಮತ್ತೆ ಕಾರ್ತಿಕ್-ಜೆಸ್ಸಿ ಪರಸ್ಪರ ಸಂಧಿಸುತ್ತಾರೆ. ಮಾತನಾಡುತ್ತಾರೆ. ನಂತರ ಕಥೆಯಲ್ಲಿ ಬದಲಾವಣೆ ಮಾಡುವ ಕಾರ್ತಿಕ್ ಕಥಾನಾಯಕ-ನಾಯಕಿಗೆ ವಿವಾಹ ಮಾಡಿಸಿ ಸಿನಿಮಾದ ಮಲೆಯಾಳಿ ಅಪ್ಪನ ಮುಂದೆ ನಿಲ್ಲಿಸುತ್ತಾನೆ. ಈ ನಡುವೆ ಸಿನಿಮಾದ ಹಿರೋಯಿನ್ ಕಾರ್ತಿಕನನ್ನು ತೀವ್ರ ಪ್ರೇಮಿಸತೊಡಗುತ್ತಾಳೆ. ಆರಂಭದಲ್ಲಿ ಜೆಸ್ಸಿ ಜೊತೆ ಕಾರ್ತಿಕ್ ನಡೆದುಕೊಂಡ ರೀತಿಯೇ ಈತನೊಂದಿಗೆ ನಡೆದುಕೊಳ್ಳುತ್ತಾಳೆ. ಅಲ್ಲಿಗೆ ಬರಡಾಗಿದ್ದ ಕಾರ್ತಿಕನ ಹೃದಯದಲ್ಲಿ ಮತ್ತೆ ಪ್ರೀತಿಯ ಒರತೆ ಪಸರಿಸತೊಡಗುವ ಸೂಚನೆಗಳು ದೊರೆಯುತ್ತವೆ. 

ಸಿನಿಮಾ ನೋಡಿದ ಬಳಿಕ ಅಷ್ಟೆಲ್ಲ ಗಾಢವಾಗಿ ಪ್ರೇಮಿಸಿದ-ತನಗಾಗಿ ದೂರದಿಂದ ಕಾತರಿಸಿ ಧಾವಿಸಿಬಂದ ಪ್ರೇಮಿಯೊಡನೆ ಜೆಸ್ಸಿ ಯಾಕೆ ಹಾಗೆ ವರ್ತಿಸಿದಳು...? ನಿರಾಕರಿಸಿ ಬಂದ ವ್ಯಕ್ತಿಯನ್ನೇ ಯಾಕೆ ವರಿಸಿದಳು...?  ಹಿಂದೆಯೇ ಈ ವ್ಯಕ್ತಿಯನ್ನೇ ಯಾಕೆ ಮದುವೆಯಾಗಲಿಲ್ಲ....? ಹೆಜ್ಜೆ ಇಡದೇ ತಿಳಿವಳಿಕೆ-ಉದ್ಯೋಗವಿದ್ದರೂ ಪ್ರೀತಿಗಾಗಿ ಕುಟುಂಬದ ಆಚೆ ಬಾರದೇ ಪ್ರೇಮಿಯ ಹೃದಯಕ್ಕೆ ತೀವ್ರವಾಗಿ ಯಾಕೆ ಘಾಸಿ ಮಾಡಿದಳು.....ಪದೇ ಪದೇ ಚಂಚಲ ಮನಸ್ಥಿತಿಯನ್ನು ಏಕೆ ವ್ಯಕ್ತಪಡಿಸಿದಳು ಎಂಬೆಲ್ಲ  ಪ್ರಶ್ನೆಗಳು ಉಳಿದುಕೊಳ್ಳುತ್ತವೆ..... ಈ ಹಿನ್ನೆಲೆಯಲ್ಲಿಯೇ 'ಹೆಣ್ಣೆ ನಿನ್ನ ಮತ್ತೊಂದು ಹೆಸರು ಚಂಚಲತೆಯೇ ಎಂಬ ಪ್ರಶ್ನೆ ಮೂಡುತ್ತದೆ.
ನಿರ್ದೇಶಕ ಗೌತಮ್ ವಾಸುದೇವ ಮೆನನ್, ಕ್ಯಾಮರಾಮನ್ ಮನೋಜ್ ಪರಮಹಂಸ, ಸಂಗೀತ ನಿರ್ದೆಶಕ ಎ.ಆರ್.ರೆಹಮಾನ್ ಅವರ ಕುಸುರಿ ಕೆಲಸ ಚಿತ್ರದುದ್ದಕ್ಕೂ ಕಾಣುತ್ತದೆ. ತ್ರಿಷಾ, ಸಿಂಬರಸನ್ ಮತ್ತು ಗಣೇಶ್ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಕಣ್ಣುಗಳಲ್ಲಿಯೇ ಭಾವ ಬಿಂಬಿಸುವ ಫ್ರೇಮುಗಳಲ್ಲಿ ಈ ಪಾತ್ರಕ್ಕೆ ಬೇರೆ ನಾಯಕಿ ಹೊಂದಾಣಿಕೆಯಾಗುತ್ತಿರಲಿಲ್ಲವೇನೋ ಎಂದು ಗಾಢವಾಗಿ ಅನಿಸುವಷ್ಟು ಮಟ್ಟಿಗೆ ತ್ರಿಷಾ ಅಭಿನಯಿಸಿದ್ದಾರೆ. ಇಡೀ ಚಿತ್ರ ತಂಡದ ಕೆಮಿಸ್ಟ್ರಿ ಚೆನ್ನಾಗಿ ವರ್ಕ್ ಔಟ್ ಆಗಿದೆ. ಗಾಢವಾದ ನೆನಪು-ಪ್ರಶ್ನೆ ಉಳಿಸುವ ಚಿತ್ರ.....

Comments

 1. heNNina manasu tumbaa sookshma
  tanna maneyavarige novu tarabaradu embudo athava thanna karege takhana ogodalilla vemba dugudavo ee nirdhaarakke baralu karanavirabahdu
  any how nimma vimarshe odisikondu hogutte

  ReplyDelete
 2. Chitra nODabEku.. Kathe ella a baredubiTri..!

  Cenemaada horagina charchege.. Ha ha... HeNNina mattondu hesaru chanchalate andare.. GaMDinadu.. Chapala.. teeTe anbOdaa?

  ReplyDelete
 3. @ ರೂಪ, ಅನೇಕ ಸಂದರ್ಭಗಳಲ್ಲಿ ಗಂಡಿಗಿಂತಲೂ ಹೆಣ್ಣು ಹೆಚ್ಚು ಖಚಿತ ನಿರ್ಧಾರ ತೆಗೆದುಕೊಳ್ಳಬಲ್ಲಳು. ಗಂಡು ತನ್ನನ್ನು ನಿಷ್ಕಪಟವಾಗಿ ಪ್ರೀತಿಸುತ್ತಿದ್ದಾನೆ ಎಂದರೆ ಎಂಥ ತ್ಯಾಗಕ್ಕೂ ಸಿದ್ಧ.(ಪೋಷಕರಿಂದ ದೂರವಾಗುವುದು, ಕಷ್ಟ-ನಷ್ಟ ಸಹಿಸುವುದು). ಇಂಥ ಹಿನ್ನೆಲೆಯಲ್ಲಿ ಜೆಸ್ಸಿಯಂಥ ಹೆಣ್ಣು ಯಾಕೆ ಹಾಗೆ ಮಾಡಿದಳು ಎನ್ನುವುದು ನನಗೆ ನಿಗೂಢ.

  ReplyDelete
 4. @ ಗುರು, ಎಲ್ಲ ಹೆಣ್ಣುಗಳೂ ಜೆಸ್ಸಿ ರೀತಿಯೇ ಇರೋದಿಲ್ಲ. ಪ್ರೀತಿಸಿದ ಹೃದಯಕ್ಕೆ ನೋವುಂಟು ಮಾಡಲು ಹೆಚ್ಚಿನವರು ಬಯಸುವುದಿಲ್ಲ. ಜೆಸ್ಸಿ ಹುಡುಗಾಟದ ಹುಡುಗಿಯಲ್ಲ. ಪ್ರಬುದ್ಧೆ. ಇಂಥವಳು ಕೊನೆ ಘಳಿಗೆಯಲ್ಲಿ ಯಾಕಿಂಥ ನಿರ್ಧಾರ ತೆಗೆದುಕೊಂಡಳು ಅನ್ನುವುದಷ್ಟೆ ಕುತೂಹಲದ ಸಂಗತಿ. ಆದ್ದರಿಂದಲೇ ಇಂಥ ಸಂದರ್ಭಕ್ಕಷ್ಟೆ ಅನ್ವಯಿಸುವಂತೆ 'ಹೆಣ್ಣೆ ನಿನ್ನ ಮತ್ತೊಂದು ಹೆಸರು ಚಂಚಲತೆಯೆ' ಎಂದು ಹೇಳಿದ್ದೇನೆ ಅಷ್ಟೆ. ಇಲ್ಲಿ ಚಂಚಲತೆ ಎಂದರೆ ದ್ವಂದ್ವ ಅಷ್ಟೆ ಹೊರತೂ ಇನ್ಯಾವ ಅರ್ಥವಲ್ಲ. ಸಿನಿಮಾದ ಹಂದರ ಹೇಳಿದ್ದೇನೆ. ಇದರಿಂದ ಸಿನಿಮಾ ನೋಡುವ ಕುತೂಹಲ ಹೆಚ್ಚಾಗಬಹುದು. ಬಹಳ ಚೆನ್ನಾಗಿ ಪ್ರೆಸೆಂಟ್ ಆಗಿರುವ ಸಿನಿಮಾ. ನೋಡಿ......

  ReplyDelete
 5. The role this movie has played in my life cant be compared!! ;-)

  ReplyDelete
 6. ನಾನೂ ನೋಡಿದ್ದೇನೆ, ಪಿಲ್ಮ್ ಜೆಸ್ಟ್ ಹಿಟ್ ಮಿ, ಟೂ

  ReplyDelete
 7. ನೀವು ಬರೆದಿರೋದನ್ನು ಓದಿದ ಮೇಲೆ ಫಿಲ್ಮ್ ನೋಡಬೇಕು ಎನ್ನಿಸಿದೆ. ನೋಡಿದ ಮೇಲೆ ಪುನಃ ಕಾಮೆಂಟ್ ಮಾಡುತ್ತೇನೆ......

  ReplyDelete

Post a Comment