ಒಮ್ಮೊಮ್ಮೆ ಕನ್ನಡ ಕಥೆಗಾರರ ಒಂದಷ್ಟು ಕಥೆಗಳು ನನ್ನ ಕಣ್ತಪ್ಪಿಸಿಕೊಂಡಿರುತ್ತವೆ. ಆಗ ಬಹುಮುಖ್ಯ ಕಥೆಗಳನ್ನೆಲ್ಲ ಓದಿದ್ದೀನಿ ಎಂಬ ಅಹಂ ಬಲೂನ್ ಟಪ್ಪನೆ ಒಡೆಯುತ್ತದೆ. ಪತ್ರಕರ್ತ ಎನ್.ಎಸ್. ಶಂಕರ್ ಅವರು ‘ಲಂಕೇಶ್ ಪತ್ರಿಕೆ” ಯಲ್ಲಿ ಬರೆದ ಲೇಖನಗಳನ್ನು ಓದಿದ್ದೆ. ಆದರೆ ಕಥೆಗಳನ್ನು ಓದಿರಲಿಲ್ಲ. ಇತ್ತೀಚೆಗೆ ಅವರ ‘ರೂಢಿ’ ಕಥಾ ಸಂಕಲನ ಸಿಕ್ಕಿತು. ಓದಿದೆ. ಗಾಢವಾಗಿ ತಟ್ಟಿತು. ಇಷ್ಟು ಅರ್ಥಪೂರ್ಣ ಕಥೆಗಳನ್ನು ಓದಿರಲಿಲ್ಲವಲ್ಲ ಎನಿಸಿತು. ರೂಢಿ ಮತ್ತಿತರ ಕಥೆಗಳಲ್ಲಿ ಎರಡು ಭಾಗಗಳಿವೆ. ಒಂದನೇ ಭಾಗದಲ್ಲಿ ಶಂಕರ್ ಅವರೇ ಬರೆದ ಕಥೆಗಳು. ಎರಡನೇ ಭಾಗದಲ್ಲಿ ಅನುವಾದಿಸಿದ ಕಥೆಗಳಿವೆ. ಮೊದಲನೇಯದರಲ್ಲಿ ಕೆಟ್ಟಕಾಲ, ರೂಢಿ, ರತಿ, ಆಡಿದ ಮಾತು, ಅನುಭವ ಮಂಟಪ, ಒಂದು ತನಿಖಾ ಪ್ರಸಂಗ ಮತ್ತು ಮೂರ್ನಾಡು ತೀರದಲ್ಲಿ ಇವೆ. ಹಿರಿಯರು ‘ನುಡಿದರೆ ಮುತ್ತಿನ ಹಾರದಂತಿರಬೇಕು’ ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೊಯ್ತು’ ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು’ ಇತ್ಯಾದಿ ಅರ್ಥಪೂರ್ಣ ನುಡಿ, ಗಾದೆ ಹೇಳುತ್ತಲೇ ಇರುತ್ತಾರೆ. ಅವುಗಳನ್ನೆಲ್ಲ ಒಂದು ಕಿವಿಯಿಂದ ಕೇಳಿ ಮತ್ತೊಂದು ಕಿವಿ ಮೂಲಕ ಆಚೆ ದಾಟಿಸಿರುತ್ತೇವೆ. ‘ಕೆಟ್ಟಕಾಲ’ ಕಥೆ ಮಾತಿನೊಳಗೆ ಅಡಗಿರುವ ಸ್ಫೋಟಕತೆಯನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡುತ್ತದೆ. ಈ ಕಥೆ ಓದಿದರೆ ಒಂದು ಮಾತನ್ನು ಬಾಯಿಂದ ದಾಟಿಸುವ ಮೊದಲು ನೂರು ಬಾರಿ ಯೋಚಿಸುತ್ತೇವೆ ಎಂದರೆ ಕಥೆಯ ಗಹನತೆ ಅರ್ಥವಾಗಬಹುದು. ...